ಫೊರೋನಿಡಿಯ -
ಅಕಶೇರುಕಗಳ ಗುಂಪಿನ ಅಪ್ರಧಾನ ವಿಭಾಗಗಳಲ್ಲಿ ಒಂದು. ಇದರಲ್ಲಿ 2 ಜಾತಿಗಳೂ ಸುಮಾರು 15 ಪ್ರಭೇದಗಳೂ ಇವೆ. ಎಲ್ಲವೂ ಸೂಕ್ಷ್ಮ ಗಾತ್ರದ ಸಾಗರವಾಸಿ ಹುಳುಗಳು. ಸ್ಥಾವರ ಜೀವನ ನಡೆಸುವ ಇವು ಸಮುದ್ರಗಳ ಆಳವಿಲ್ಲದ ಮಣ್ಣಿನಲ್ಲಿ ಪೊರೆಯಂಥ ಇಲ್ಲವೆ ಗಟ್ಟಿಯಾದ ಕೊಳವೆಗಳನ್ನು ರಚಿಸಿಕೊಂಡು ಜೀವಿಸುವುವು. ಪ್ರೌಢಜೀವಿಗಳು ದ್ವಿಲಿಂಗಿಗಳು, ಇವುಗಳ ದೇಹ ವಲಯಗಳಾಗಿ ವಿಭಾಗಗೊಂಡಿಲ್ಲ. ಡಿಂಬಗಳಾದರೊ ಮುಕ್ತವಾಗಿ ಈಜಿಕೊಂಡು ಇರುವುವು; ಇವಕ್ಕೆ ಆಕ್ಟಿನೋಟ್ರೋಕ ಎಂದು ಹೆಸರು.

	ಫೊರೋನಿಸ್ ಮತ್ತು ಫೊರೋನಾಪ್ಸಿಸ್‍ಗಳು ಪರಿಚಿತ ಜಾತಿಗಳು. ಫೊರೋನಿಸ್ ಎಂಬುದು ಗಡುಸಾದ ಇಲ್ಲವೆ ಪೊರೆಯಂತಿರುವ ಕೊಳವೆಗಳಲ್ಲಿ ಜೀವಿಸುತ್ತವೆ. ಇದರ ದೇಹ ಉದ್ದವಾಗಿ ಖಂಡರಹಿತ ಕೊಳವೆಯಂತಿದೆ. ದೇಹದ ಮುಂದಿನ ತುದಿಯಲ್ಲಿ ಶಿಲಕೆಗಳಿಂದ ಕೂಡಿದ ಕೋಡುಗಳುಂಟು. ಇವು ಒಳ ಮತ್ತು ಹೊರ ಸಾಲುಗಳಲ್ಲಿ ಕುದುರೆ ಲಾಳದ ಆಕಾರದಲ್ಲಿ ಜೋಡಣೆಗೊಂಡಿವೆ. ಈ ಗುಂಪಿಗೆ ಲೋಫೊಫೋರ್ ಎಂದು ಹೆಸರು. ಕೋಡುಗಳ ಒಳ ಮತ್ತು ಹೊರಸಾಲಿನ ಮಧ್ಯೆ ಬಾಯಿ ಇದೆ. ಬಾಯಿ ಸನಿಹದಲ್ಲೇ ಗುದದ್ವಾರ ಉಂಟು. ಬಾಯಿಯ ಮೇಲೆ ಮುಚ್ಚಳದಂತೆ ಮುಂಚಾಚಿರುವ ಎಪಿಸ್ಟೋಮ್ ಎಂಬ ಸ್ನಾಯುಭಾಗ ಇದೆ. ದೇಹದ ಹೊರಭಾಗದಲ್ಲಿ ತೆಳುವಾದ ಹೊರ ಪದರವುಂಟು. ಇದರ ಕೆಳಗೆ ತಳಪೊರೆಯೂ ಒಳಭಾಗದಲ್ಲಿ ವರ್ತುಲಾಕಾರದ ಸ್ನಾಯುತಂತುಗಳೂ ಇವೆ. ಸ್ನಾಯುಗಳ ಒಳಮುಖದಲ್ಲಿ ಸೀಲೋಮಿಕ್ ಅನುಲೇಪಕ ಕಣಗಳು ಹರೆಡಿವೆ.

	ದೇಹದೊಳಗಿನ ದೇಹಾಂತರಾವಕಾಶವನ್ನು (ಸೀಲೋಮ್) ಒಂದು ಅಡ್ಡ ಪೊರೆ ಮುಂಭಾಗದ ಸಣ್ಣ ಅವಕಾಶ ಮತ್ತು ಹಿಂಭಾಗದ ದೊಡ್ಡ ಅವಕಾಶ ಎಂಬ ಎರಡು ಭಾಗಗಳಾಗಿ ವಿಭಾಗಿಸುತ್ತದೆ. ಹಿಂಭಾಗದ ಅವಕಾಶದಲ್ಲಿ ಮೂರು ವಿಭಾಗಗಳುಂಟು. ಜೀರ್ಣನಾಳ U-ಆಕಾರದ್ದು; ಅನ್ನನಾಳ, ಜಠರ, ಕರುಳು ಮತ್ತು ಗುದಭಾಗಗಳನ್ನು ಇದು ಒಳಗೊಂಡಿದೆ. ನಿರ್ದಿಷ್ಟ ಶ್ವಾಸಾಂಗಗಳು ಇಲ್ಲ. ಎರಡು ನೆಫ್ರೀಡಿಯಲ್ ನಾಳಗಳೇ ಶುದ್ಧೀಕರಣಾಂಗಗಳು. ಇವು ಗುದದ ಬಳಿ ಹೊರತೆರೆಯುವುವು.

	ಬಾಯಿಯ ಕೆಳಭಾಗದಲ್ಲಿ ಉಂಗುರಾಕಾರದ ನರತಂತುಗಳಿವೆ. ಇವುಗಳಿಂದ ಕೋಡು, ಬಾಯಿ, ಎಪಿಸ್ಟೋಮ್ ಮತ್ತು ಇತರ ರಚನೆಗಳಿಗೆ ನರತಂತುಗಳು ಹರಡುವುವು. ದೇಹದ ಹಿಂಭಾಗದಲ್ಲಿ ಎರಡು ನೀಳನರತಂತುಗಳಿವೆ. ಜ್ಞಾನೇಂದ್ರೀಯಗಳು ಬಹಳ ಸರಳ ರಚನೆಯವು.

	ಫೊರೋನಿಡಿಯದ ಸದಸ್ಯಗಳು ದ್ವಿಲಿಂಗಿಗಳು. ದೇಹಾಂತರಾವಕಾಶದ ಹಿಂದಿನ ಕೋಣೆಯಲ್ಲಿರುವ ನೀಳ ರಕ್ತನಾಳಗಳ ಮೇಲೆ ಪ್ರಜನನಾಂಗಗಳು ಉತ್ಪತ್ತಿಯಾಗುವುವು. ನೆಫ್ರೀಡಿಯಗಳ ಮೂಲಕ ಪ್ರಜನನ ಜೀವಕಣಗಳು ಹೊರ ಬರುತ್ತವೆ. 	
(ಪಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ